ಲ್ಯಾಟಿನ್ ಅಮೇರಿಕ ವು ಅಮೆರಿಕ ಖಂಡಗಳಲ್ಲಿನ ರೋಮಾನ್ಸ್ ಭಾಷೆಗಳನ್ನು ಪ್ರಮುಖವಾಗಿ ಉಪಯೋಗಿಸುವ ದೇಶಗಳ ಪ್ರಾಂತ್ಯವಾಗಿದೆ - ಅಂದರೆ ಈ ಪ್ರದೇಶಗಳಲ್ಲಿ ಲ್ಯಾಟಿನ್ ಭಾಷೆಗಳಿಂದ (ಮುಖ್ಯವಾಗಿ ಸ್ಪಾನಿಷ್ ಹಾಗೂ ಪೋರ್ಚುಗೀಸ್) ಉತ್ಪತ್ತಿಯಾದ ಭಾಷೆಗಳನ್ನು ಮಾತನಾಡುತ್ತಾರೆ. ಲ್ಯಾಟಿನ್ ಅಮೇರಿಕವು ಉಳಿದ ಇಂಗ್ಲೀಷ್ ಮಾತನಾಡುವ ಪ್ರದೇಶಗಳಿಗಿಂತ ಭಿನ್ನವಾಗಿದೆ. == ವಿವರಣೆ == ಲ್ಯಾಟಿನ್ ಅಮೇರಿಕಾದ ಬಗ್ಗೆ ವಿವಿಧ ನಿರೂಪಣೆಗಳು ದೊರೆಯುತ್ತವೆ. ಆದರೆ ಬಹಳಷ್ಟು ವಿವರಗಳು ಲ್ಯಾಟಿನ್ ಅಮೆರಿಕವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗುತ್ತವೆ: ಸಾಮಾನ್ಯವಾಗಿ ಲ್ಯಾಟಿನ್ ಅಮೇರಿಕವನ್ನು ಅಮೇರಿಕಾ ಖಂಡಗಳಲ್ಲಿ ಸ್ಪಾನಿಶ್ ಹಾಗೂ ಪೋರ್ಚುಗೀಸ್ ಭಾಷೆಗಳನ್ನು ಬಳಸುವ ಮೆಕ್ಸಿಕೋ, ಮಧ್ಯ ಹಾಗೂ ದಕ್ಷಿಣ ಅಮೇರಿಕಾ, ಕ್ಯೂಬಾ, ಪೋರ್ಟೋ ರಿಕೋ ಮತ್ತು ಕೆರಿಬಿಯನ್ ರಾಷ್ಟ್ರಗಳೊಂದಿಗೆ ಗುರುತಿಸುತ್ತಾರೆ. ನಿಖರವಾಗಿ ಹೇಳಬಹುದಾದರೆ, ರೋಮಾನ್ಸ್ ಭಾಷೆಗಳಾದ - ಸ್ಪಾನಿಶ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಗಳನ್ನು ಅಳವಡಿಸಿಕೊಂಡಿರುವ ಅಥವಾ ಮಾತನಾಡುವ ಪ್ರದೇಶಗಳೆಲ್ಲ ಸೇರುತ್ತವೆ. ಹಾಗಾದಲ್ಲಿ ಕೆನಡಾದ ಕ್ವೆಬೆಕ್ ಪ್ರಾಂತ್ಯ ಮತ್ತು ಫ್ರಾನ್ಸ್ನ ಹಳೆಯ ವಸಾಹತುಗಳಾದ ಕೆರಿಬಿಯನ್ನ ಹೈತಿ, ಮಾರ್ಟಿನಿಕ್ ಹಾಗು ಗ್ವಾಡಲೊಪ್ಗಳು, ಮತ್ತು ದಕ್ಷಿಣ ಅಮೇರಿಕದ ಫ್ರೆಂಚ್ ಗಯಾನ ಕೂಡ ಸೇರುತ್ತವೆ.